ಹಂತಿಯ ಹಾಡುಗಳು

	ಉತ್ತರ ಕರ್ನಾಟಕ ಪ್ರದೇಶದಲ್ಲಿ ಸುಗ್ಗಿಯ ಕಾಲದಲ್ಲಿ ಹಂತಿ ಹೂಡಿದಾಗ ಹೇಳುವ ಹಾಡುಗಳು. ಕಣದ ಮಧ್ಯದಲ್ಲಿ ನೆಟ್ಟ ಮೇಟಿ ಕಂಬದ ಸುತ್ತಲು ಅನುಕೂಲವಾದ ವರ್ತುಲಸ್ಥಳದಲ್ಲಿ ಜೋಳದ ತೆನೆಗಳನ್ನು ಹರಡಿ, ಸಿಂಗರಿಸಿದ ಎತ್ತುಗಳಿಂದ ವ್ಯವಸ್ಥಿತವಾಗಿ ತುಳಿಸುವ ವಿಧಾನಕ್ಕೆ ಹಂತಿ ಎನ್ನುತ್ತಾರೆ. ಹಂತಿ ಎಂದರೆ ಸಾಲು ಎಂದರ್ಥ. ರಾತ್ರಿ ಎಂಟು-ಒಂಬತ್ತು ಗಂಟೆಗೆ ಆರಂಭವಾದ ಹಂತಿ ತುಳಿಸುವ ಕೆಲಸ ಬೆಳಗಿನ ತನಕ ಸಾಗುತ್ತದೆ.

	ಹಂತಿಯ ಹಾಡುಗಳನ್ನು ಹಾಡುವವರು ಹೆಚ್ಚಾಗಿ ಪುರುಷರು; ಕೆಲವು ಕಡೆ ಸ್ತ್ರೀಯರೂ ಹಾಡುವುದುಂಟು. ಹಂತಿ ಹೂಡುವಿಕೆಯ ಆರಂಭದೊಂದಿಗೇ ಹಂತಿಯ ಹಾಡು ದೇವತಾಸ್ತುತಿಯೊಡನೆ ಪ್ರಾರಂಭವಾಗುತ್ತದೆ. ಹೆಚ್ಚಾಗಿ ಬಿಡಿ ಗೀತೆಗಳನ್ನು ಹಾಡಿದರೂ ಮಹಾಪುರುಷರ, ವೀರರ, ದೈವಗಳ ಚರಿತ್ರೆಯನ್ನು ಹಾಡುವುದುಂಟು. ಇತಿಹಾಸ ಪುರುಷರಲ್ಲಿ ಸಂಗೊಳ್ಳಿ ರಾಯಣ್ಣ, ಮಲ್ಲಸರ್ಜ ದೊರೆ, ನರಗುಂದದ ಬಾಬಾಸಾಹೇಬ, ಮುಂಡರಗಿ ಭೀಮರಾವ್, ರಾಣಿ ಚೆನ್ನಮ್ಮಾಜಿ, ಬೆಳವಡಿ ಮಲ್ಲವ್ವ-ಇವರ ಚರಿತ್ರೆಗಳು ಪ್ರಖ್ಯಾತವಾಗಿವೆ.	
								
(ಎಸ್.ಎಲ್.)

	ಹಂತಿಯ ಹಾಡುಗಳು ಸಮೂಹಗೀತೆಗಳು; ಬಹುವಾಗಿ ತ್ರಿಪದಿ ರೂಪದಲ್ಲಿ ದೊರೆಯುತ್ತವೆ; ಕೆಲವು ಸವಾಲ್-ಜವಾಬ್ ಮಾದರಿಯಲ್ಲಿವೆ; ಇನ್ನು ಕೆಲವು ಒಡಗತೆಗಳ (ಒಗಟುಗೀತೆ) ರೂಪದಲ್ಲಿಯೂ ಕಾಣಬರುತ್ತವೆ. ಒಕ್ಕುವ ಕಾಯಕದಲ್ಲಿ, ರಾತ್ರಿಯ ಏಕಾಂತದಲ್ಲಿ ಬೇಸರ ನೀಗಲು, ಕೆಲಸದಲ್ಲಿ ತತ್ಪರರಾದ ಕೆಲಸಗಾರರು ನಿದ್ದೆಹೋಗದಿರಲು, ಲವಲವಿಕೆಯಿಂದ ಇಡೀ ರಾತ್ರಿ ಕೆಲಸಮಾಡಲು ಈ ಹಾಡುಗಳು ನೆರವಾಗುತ್ತವೆ. ಹಾಡಿನ ಮಧ್ಯದಲ್ಲಿ ಹುಲ್ಹುಲಿಗೊ, ಹುಲಸಿಗೊ, ಹುಲಿಗ್ಯೊ ಎಂಬ ಕಾಕು ಹಾಕುವುದುಂಟು. ಮನೆ ತುಂಬ ಕಾಳು ಬರಲಿ, ಧಾನ್ಯರಾಶಿ ಹುಲುಸಾಗಲಿ ಎಂಬುದು ಇವುಗಳ ಅರ್ಥವೆಂದು ತಿಳಿದುಬರುತ್ತದೆ. ಈ ಹಾಡುಗಳಲ್ಲಿ ಮನಸೂರೆಗೊಳ್ಳುವ ಸಂದರ್ಭವೆಂದರೆ ಕಂಕಿ ತೆಗೆವಾಗಿನ ಚುಟುಕಗಳು. ಈ ಬಿಡಿಮುತ್ತುಗಳಲ್ಲಿ ಶೃಂಗಾರ, ಹಾಸ್ಯರಸಗಳ ಹೊನಲು ಹರಿದಿರುತ್ತದೆ. ಇವು ಜನಪದರ ರಸಿಕ ಮನೋವೃತ್ತಿಯನ್ನೂ ಬಿಂಬಿಸುತ್ತವೆ. ಒಂದು ತ್ರಿಪದಿ ಹೀಗಿದೆ:
ಹಚ್ಚನ ಹಚ್ಚಿಬಟ್ಟು ಉದ್ದನ ಮಲಿಕಟ್ಟು
ಸಿಗದಂತ ಸಣ್ಣ ನಡುವಿನ ಎಲೆ ಬಾಲೆ
ಮುರುಕ ಮಾಡಬ್ಯಾಡ ಮುರದೀತು
	ರೈತರಿಗೆ ಆಪ್ತ ಸಂಗಾತಿಗಳೆಂದರೆ ಉಳುಮೆ ಮಾಡುವ ಎತ್ತುಗಳು. ಅವು ಅವರಿಗೆ ದೈವಸ್ವರೂಪಿ. ಇಂಥ ಜೀವದ ಸಂಗಾತಿಗಳನ್ನು ಕುರಿತ ಹಾಡುಗಳು ಹಂತಿಯ ಹಾಡುಗಳಲ್ಲಿ ರಾಶಿಯಾಗಿ ದೊರೆಯುತ್ತವೆ. ಮುದ್ದು ಬಸವಣ್ಣ, ಸರದಾರನನ್ನೆತ್ತೆ, ಬಂಟ ಬಸವಣ್ಣ ಎಂದು ಎತ್ತುಗಳನ್ನು ಕುರಿತು ಎಷ್ಟು ಹಾಡಿಹೊಗಳಿದರೂ ಅವರಿಗೆ ತೃಪ್ತಿಯಿಲ್ಲ. ಒಂದು ತ್ರಿಪದಿ ಹೀಗಿದೆ:
ಪುಂಡಾನ ಎತಗೋಳು ತಿಂಡೀನೆ ತಿಂದಾವೊ
ಗುಂಡದ ನೀರ ಕುಡಿದಾವೊ ನಮ್ಮೆತ್ತ
ಗಂಡೆಳ್ಳಿ ಕಂಡು ಹೆದರ್ಯಾವೊ
	ಹಂತಿಯ ಹಾಡುಗಳಲ್ಲಿ ಹಾಡಿನ ನಡುವೆ ಹೇಳುವ ಒಡಗತೆಗಳು ಬಹುಸ್ವಾರಸ್ಯವಾಗಿರುತ್ತವೆ. ಇಂಥ ಒಡಗತೆಗಳ ಪ್ರಶ್ನೋತ್ತರ ರೂಪದ ಚಕಮಕಿ ಕೇಳುಗರಿಗೆ ಹುರುಪು ತರಿಸುತ್ತದೆ. ಒಂದು ಒಡಗತೆ ಹೀಗಿದೆ:
ಪ್ರಶ್ನೆ : ಸಣ್ಣವನ ಸಣಕುಂಡಿ ದೊಡ್ಡವನ ದೊಡಕುಂಡಿ
ಒಬ್ಬವಗ ಕುಂಡಿ ಮೊದಲಿಲ್ಲೊ
ಉತ್ತರ : ಸೂಜಿಗಿ ಸಣಕುಂಡಿ ಡಬ್ಬಣಕ ದೊಡಕುಂಡಿ
ಕುದರಿಗಿ ಕುಂಡಿ ಮೊದಲಿಲ್ಲೊ.
	ಹಂತಿಯ ಹಾಡುಗಳಲ್ಲಿ ಉಕ್ಕಿ ಹರಿದಿರುವುದು, ಬೆವರು ಸುರಿಸಿ ದಿನಬೆಳಗುದುಡಿವ ರೈತರ ಮೃದುಮಧುರ ಭಾವನೆಗಳು, ಅವರ ಬದುಕಿಗೆ ಸಂಬಂಧಿಸಿದ ವಿವರಗಳು, ನಂಬಿಕೆ, ನಡವಳಿಕೆಗಳು. ಹಂತಿ ತುಳಿಸುವ ಕೆಲಸದಲ್ಲಿ ಉಪಯೋಗಿಸುವ ಸಾಧನಗಳ ಹೆಸರುಗಳಾದ ಕಡೆಗೋಲು, ಕುಡುಗೋಲು, ಸೆಡ್ಡಿ ಮಂಡೆಯಗೋಲು, ಬ್ಯಾಕೋಲು, ಬಾರ್ಕೋಲು, ವಾರ್ಗೋಲು ಇತ್ಯಾದಿಗಳು ಈ ಹಾಡುಗಳಲ್ಲಿ ಆನುಷಂಗಿಕವಾಗಿ ಬರುತ್ತವೆ. ಬೆಳಗುಮುಂಜಾವು ಹಂತಿಯ ಕಡೆಯ ಭಾಗ. ಹಂತಿ ಬಿಡುವ ಸಂದರ್ಭದಲ್ಲಿ ಹೀಗೆ ಹಾಡುತ್ತಾರೆ: ಹಂತಿ ಹೊಡೆಯೋದ್ ಆಯ್ತು ಕಂತಿ ಕಡಿಯಸ ಆಯ್ತು, ಕಡಿಯತ್ತಿನ ಹೆಂಡಿ ಹಿಡಿಬೇಕು ಬೂದಗನ, ಕಟ್ಟಬೇಕು ಚಂಡಿಕಿ, ಹಚ್ಚಬೇಕು ಬೂದಗನ, ಪದವೊಂದು ಅನಬೇಕು ಹಂತಿ ಬಿಡಬೇಕು.

	ಹಂತಿ ಹಾಡುಗಳನ್ನು ಸುಶ್ರಾವ್ಯವಾಗಿ ಹಾಡುವ ಕಲಾವಿದರು ಗುಲ್ಬರ್ಗ ಜಿಲ್ಲೆಯಲ್ಲಿ ಅದರಲ್ಲಿಯೂ ಸಿರೂರ, ಮುಗಳಿ, ಕಡಗಂಚಿ, ಶಿಂಗನಹಳ್ಳಿ, ಬಾನಾಳ, ಹಗರಟಗಿ ಮೊದಲಾದ ಕಡೆ ಕಂಡುಬರುತ್ತಾರೆ. ಈ ಹಾಡುಗಳ ಸಂಗ್ರಹಕಾರ್ಯ ನಡೆದಿದ್ದು, ಅನೇಕ ಕೃತಿಗಳು ಪ್ರಕಟಗೊಂಡಿವೆ. ಬಿ.ಎಸ್. ಗದ್ದಗಿಮಠ ಅವರ ಕನ್ನಡ ಜಾನಪದ ಗೀತೆಗಳು ಎಂಬ ಕೃತಿಯಲ್ಲಿ ಅನೇಕ ಪದಗಳಿವೆ. ಎಂ.ಎಸ್. ಲಠ್ಠೆ ಅವರು ಉತ್ತರ ಕರ್ನಾಟಕದ ಹಂತಿಯ ಹಾಡುಗಳು ಎಂಬ ಗ್ರಂಥವನ್ನು ಪ್ರಕಟಿಸಿದ್ದಾರೆ (1975).	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

 		*